60 ಅಡಿ ಬಾವಿ ತೋಡಿದ ಚಿಕ್ಕಮಗಳೂರಿನ ಭಗೀರಥ ದಂಪತಿ

 60 ಅಡಿ ಬಾವಿ ತೋಡಿದ ಚಿಕ್ಕಮಗಳೂರಿನ ಭಗೀರಥ ದಂಪತಿ

ಉರಿ ಬಿಸಿಲಲ್ಲಿ ಬಾವಿಗೆ ಇಳೀತಿರೋ ವ್ಯಕ್ತಿ… ಮಣ್ಣನ್ನ ತುಂಬಿರೋ ಬುಟ್ಟಿಯನ್ನ ಮೇಲಕ್ಕೆ ಎತ್ತುತ್ತಿರೋ ಮಹಿಳೆ. ಬಾವಿಗೆ ಇಳಿದ ಹಗ್ಗದ ಸಹಾಯದಿಂದಲೇ ಮೇಲಕ್ಕೆ ಬರ್ತಿರೋ ವ್ಯಕ್ತಿ. ಇನ್ನೂ ನೀರು ಬಂದಿಲ್ಲ ಎಷ್ಟು ಆಳ ತೆಗೆಯಬೇಕೋ ಅಂತ ಯೋಚಿಸ್ತಿರೋ ದಂಪತಿ. ಏನಿದು, ಬಾವಿ ಕಥೆ ಅಂತಿದ್ದೀರಾ…

ಈ ಬಾವಿಯ ಹಿಂದೆ ಮೈನವಿರೇಳಿಸೋ ಸ್ಟೋರಿ ಇದೆ. ಈ ದಂಪತಿ ಹೆಸ್ರು ರಾಜು-ಶಾರದಾ. ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಅಣಜೂರಿನವರು. 30*40 ಸೈಟಲ್ಲಿ ಗುಡಿಸಲು ಹಾಕ್ಕೊಂಡ್ ಬದುಕುತ್ತಿದ್ದಾರೆ. ಕೂಲಿಯೇ ಇವ್ರ ಜೀವಾಳ. ದಿನವಿಡಿ ದಣಿದು ಬಂದ್ರೆ ಸಂಜೆ ನೀರಿಗೆ ಹಾಹಾಕಾರ. ನೀರು ಕೇಳಿದರೆ ಜನ ಜಗಳಕ್ಕೆ ಬರ್ತಿದ್ರು. ಸಮೀಪದ ನಲ್ಲಿ ಬಳಿ ನೀರಿಗೆ ಹೋದಾಗ ಗಲಾಟೆಯೂ ಆಯ್ತು. ಯಾರನ್ನ ಕೇಳಿದ್ರು ನೀರು ಕೊಡ್ಲಿಲ್ಲ. ಆಗಲೇ ತೀರ್ಮಾನಿಸಿದ ಈ ದಂಪತಿ ನೀರಿಗಾಗಿ ಬಾವಿಯನ್ನೇ ತೆಗೆದಿದ್ದಾರೆ.

30*40 ಸೈಟಿನಲ್ಲಿ ದಂಪತಿಗಳಿಬ್ಬರು ಸೇರಿ 5 ಅಡಿ ಅಗಲ, 60 ಅಡಿ ಆಳದ ಬಾವಿಯನ್ನೇ ತೋಡಿದ್ದಾರೆ. ಹಗಲಲ್ಲಿ ಕೂಲಿಗೂ ಹೋಗಿ ಬೆಳಗ್ಗೆ 2 ಗಂಟೆ, ಸಂಜೆ 2 ಗಂಟೆ ದಿನಕ್ಕೆ ನಾಲ್ಕೇ ಗಂಟೆ ಕೆಲಸ ಮಾಡಿ ಬಾವಿಯನ್ನೇ ತೋಡಿದ್ದಾರೆ. ಬಾವಿಯಲ್ಲಿ ನೀರು ಜಿನುಗುತ್ತಿದ್ದು ಇನ್ನೈದು ಅಡಿ ತೆಗೆದರೆ ಸಮೃದ್ಧ ಜಲ ಉಕ್ಕಲಿದೆ.

ನೀರಿಲ್ಲ ಅಂತ ನೊಂದು ಕೂತ ದಂಪತಿಗೆ ಹೊಳೆದದ್ದೇ ಬಾವಿ ಐಡಿಯಾ. 13 ವರ್ಷ ಶಬರಿಮಲೆಗೆ ಹೋಗಿದ್ದ ರಾಜು ಅಯ್ಯಪ್ಪ…. ನೀನೆ ಗತಿಯಪ್ಪಾ ಅಂತ ಅಯ್ಯಪ್ಪನಿಗೆ ಪೂಜೆ ಮಾಡಿ ಸಂಕ್ರಾತಿಯ ಜ್ಯೋತಿಯ ದಿನದಂದೇ ಬಾವಿ ತೆಗೆಯಲು ಭೂಮಿಗೆ ಮೊದಲ ಹಾರೆ-ಪಿಕಾಸಿ ಹಾಕಿದ್ರು. ಇವ್ರ ಸಾಹಸವನ್ನ ಕಂಡು ಹುಚ್ಚರು ಎಂದು ನಕ್ಕವರೇ ಹೆಚ್ಚು.

ಆದ್ರು ಹಠ ಬಿಡದ ರಾಜು-ಶಾರದಾ ದಂಪತಿ ಕೇವಲ ಹಾರೆ-ಪಿಕಾಸಿಯಲ್ಲೇ ಬಾವಿ ತೋಡಿ ಮುಗಿಸಿದ್ದಾರೆ. 55 ದಿನದ ನಿರಂತರ ಶ್ರಮದಿಂದ ಇದೀಗ ಬಾವಿಯಲ್ಲಿ ಜಲ ಕಾಣಿಸಿಕೊಂಡಿದೆ. ಕೊನೆಗೂ ನಮ್ಮ ಪ್ರಯತ್ನ ಯಶ ಕಾಣುವ ಸೂಚನೆ ಸಿಕ್ಕಿದಂತಾಗಿರೋದಕ್ಕೆ ದಂಪತಿಯ ಕಣ್ಣಲ್ಲಿ ನೀರು ಜಿನುಗುತ್ತಿದೆ. ಮೂರು ವರ್ಷದ ಹಿಂದೆ ಸೈಟ್ ಕೊಟ್ಟಿರೋ ಪಂಚಾಯಿತಿ ಸೂಕ್ತ ಸೂರು ನಿರ್ಮಿಸಿಕೊಟ್ಟಿಲ್ಲ. ಟಾರ್ಪಲ್ ಶೆಡ್ನಲ್ಲಿ ವಾಸವಿರೋ ಈ ಕುಟುಂಬ ನಮಗೊಂದು ಸೂರು ಕೊಡಿಸಿ ಅಂತ ಕಣ್ಣೀರಿಟ್ಟಿದ್ದಾರೆ.

ಈ ದಂಪತಿಗೆ 3 ಜನ ಮಕ್ಕಳು. ದೊಡ್ಡವಳ ಮದುವೆಯಾಗಿದೆ. 2ನೇ ಮಗಳು ಮಂಗಳೂರಿನಲ್ಲಿ ಮನೆ ಕೆಲಸ ಮಾಡಿಕೊಂಡು ಓದುತ್ತಿದ್ದಾಳೆ. ಮಗ ಹೋಟೆಲ್ನಲ್ಲಿ ಕೆಲಸ ಮಾಡಿಕೊಂಡು ಐಟಿಐ ಓದುತ್ತಿದ್ದಾನೆ. ಬದುಕಿಗಾಗಿ ಅಪ್ಪ-ಮಕ್ಕಳು ಒಂದೊಂದು ಕಡೆ ದುಡಿಯುತ್ತಿದ್ದಾರೆ. ಇಡೀ ಕುಟುಂಬ ಕಣ್ಣೀರಲ್ಲೇ ಕೈ ತೊಳೆಯುತ್ತಿದೆ. ಇಂತಹಾ ಕಷ್ಟಜೀವಿಗಳಿಗೆ ನೀರು ಕೊಡದಿರುವುದು ನಿಜಕ್ಕೂ ದುರಂತ. ಈ ಆಧುನಿಕ ಭಗೀರಥರು ಬಾವಿಗೆ ರಿಂಗ್ ಕೂರಿಸೋಕಾದ್ರು ಸಹಕಾರ ಕೊಟ್ರೆ ಸಾಕು ಅಂತಿದ್ದಾರೆ. ಆಗ ಈ ಬಡಪಾಯಿಗಳ ಶ್ರಮಕ್ಕೆ ಬೆಲೆ ಸಿಕ್ಕಂತಾಗುತ್ತೆ. ಅದೇನೆ ಇರ್ಲಿ, ಎದುರಾದ ಕಷ್ಟಕ್ಕೆ ಕಂಗೆಡದೆ ತೊಡೆ ತಟ್ಟಿ ನೀರಿಗಾಗಿ ಬಾವಿಯನ್ನೇ ತೋಡಿದ ಈ ಹಠವಾದಿ ದಂಪತಿಗಳ ಹ್ಯಾಟ್ಸಾಫ್ ಹೇಳಲೇಬೇಕು.





Comments

Popular posts from this blog

ಸಾರ್ವಜನಿಕ ಶೌಚಾಲಯ ಕದ್ದು, 45 ಸಾವಿರ ರೂ.ಗೆ ಮಾರಿದ ಕಿರಾತಕ

ಬ್ರಾಂಡ್ ವ್ಯಾಲ್ಯೂ ಕಡಿಮೆಯಾದರೂ ಕೊಹ್ಲಿ ನಂ.1 – ಯಾರ ಮೌಲ್ಯ ಎಷ್ಟು