ರಾಷ್ಟ್ರಮಟ್ಟದ ಜಂಪ್ ರೋಪ್ ಸ್ಪರ್ಧೆಯಲ್ಲಿ ರಾಜ್ಯಕ್ಕೆ 5 ಚಿನ್ನ, 7 ಬೆಳ್ಳಿ ಪದಕ – ವಿದ್ಯಾರ್ಥಿಗಳಿಗೆ ಅದ್ದೂರಿ ಸ್ವಾಗತ
ರಾಷ್ಟ್ರಮಟ್ಟದ ಜಂಪ್ ರೋಪ್ ಸ್ಪರ್ಧೆಯಲ್ಲಿ ರಾಜ್ಯಕ್ಕೆ 5 ಚಿನ್ನ, 7 ಬೆಳ್ಳಿ ಪದಕ – ವಿದ್ಯಾರ್ಥಿಗಳಿಗೆ ಅದ್ದೂರಿ ಸ್ವಾಗತ
ಕೊಪ್ಪಳ: ಉತ್ತರ ಪ್ರದೇಶದ ಆಗ್ರಾದಲ್ಲಿ ನಡೆದ ರಾಷ್ಟ್ರೀಯ ಮಟ್ಟದ ಜಂಪ್ ರೋಪ್ ಸ್ಪರ್ಧೆಯಲ್ಲಿ ಕರ್ನಾಟಕಕ್ಕೆ 5 ಚಿನ್ನದ ಪದಕ ಹಾಗೂ 7 ಬೆಳ್ಳಿ ಪದಕಗಳನ್ನು ವಿದ್ಯಾರ್ಥಿಗಳು ತಂದುಕೊಟ್ಟಿದ್ದು ಕರ್ನಾಟಕ್ಕೆ ಕೀರ್ತಿ ತಂದಿದ್ದಾರೆ.
ಭಾರತೀಯ ಜಂಪ್ ರೋಪ್ ಫೆಡರೇಶನ್ ವತಿಯಿಂದ ಜರುಗಿದ ಜಂಪ್ ರೋಪ್ 2021-2022 ಸ್ಪರ್ಧೆಯು ಆಗ್ರಾದ ಜಾನ್ ಮಿಲ್ಟನ್ ಶಾಲೆಯಲ್ಲಿ ನಡೆಯಿತು. ಇದರಲ್ಲಿ 16 ಹಾಗೂ 18 ವರ್ಷದೊಳಗಿನ ವಿದ್ಯಾರ್ಥಿಗಳು ಸ್ಪರ್ಧೆ ಮಾಡಿದ್ದರು. ಈ ಸ್ಪರ್ಧೆಯಲ್ಲಿ ಕರ್ನಾಟಕ ರಾಜ್ಯದಿಂದ ಬಾಗಲಕೋಟೆ, ಕಾರವಾರ ಹಾಗೂ ಕೊಪ್ಪಳದ 9 ಸ್ಪರ್ಧಿಗಳು ಭಾಗವಹಿಸಿದ್ದರು.
ಮೂರು ದಿನಗಳ ಕಾಲ ಜರುಗಿದ ಸ್ಪರ್ಧೆಯಲ್ಲಿ ಒಟ್ಟು ರಾಜ್ಯದಿಂದ 6 ವಿದ್ಯಾರ್ಥಿನಿಯರು ಹಾಗೂ 3 ವಿದ್ಯಾರ್ಥಿಗಳು ಭಾಗವಹಿಸಿ ಉತ್ತಮ ಪ್ರದರ್ಶನ ನೀಡಿದ್ದಾರೆ. ಈ ಮೂಲಕ ರಾಜ್ಯಕ್ಕೆ 7 ಬೆಳ್ಳಿ ಪದಕ ಹಾಗೂ 5 ಚಿನ್ನದ ಪದಕಗಳನ್ನು ಬಾಚಿಕೊಂಡು ಕೀರ್ತಿ ತಂದಿದ್ದಾರೆ. ಹಾಗಾಗಿ ಕೊಪ್ಪಳ ರೈಲ್ವೆ ನಿಲ್ದಾಣಕ್ಕೆ ಆಗಮಿಸಿದ ವಿಜೇತ ವಿದ್ಯಾರ್ಥಿಗಳನ್ನು ಹಾಗೂ ತರಬೇತಿದಾರರನ್ನು, ಪಾಲಕರು, ಸ್ಕೌಟ್ಸ್ ಹಾಗೂ ಗೈಡ್ಸ್ ಸದಸ್ಯರು, ಶಾಲೆಯ ಶಿಕ್ಷಕರು ಸೇರಿದಂತೆ ಸ್ಥಳೀಯ ಮುಖಂಡರು ಅದ್ದೂರಿಯಾಗಿ ಸ್ವಾಗತಿಸಿ ಸನ್ಮಾಸಿದರು. ಎಲ್ಲರಿಗೂ ಗುಲಾಬಿ ಹೂ ನೀಡುವುದರ ಜೊತೆಗೆ ಸಹಿಹಂಚಿದರು.
ಸಂತಸದ ಸಂದರ್ಭದಲ್ಲಿ ತರಬೇತುದಾರ ನಿಂಗಪ್ಪ.ಡಿ.ಕಂಚಿ ಮಾಧ್ಯಮಗಳೊಂದಿಗೆ ಮಾತನಾಡಿದ್ದು, ಇದೊಂದು ರಾಜ್ಯಕ್ಕೆ ಸಂತಸದ ವಿಷಯ. ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಉತ್ತಮ ಪ್ರದರ್ಶನ ನೀಡುವ ಮೂಲಕ ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ. ಮುಂದಿನ ದಿನಗಳಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ಸ್ಪರ್ಧೆ ಮಾಡಲಿದ್ದಾರೆ ಎಂದು ಸಂತೋಷ ವ್ಯಕ್ತಪಡಿಸಿದರು.
ಸ್ಪರ್ಧೆಯಲ್ಲಿ ಭಾಗವಹಿಸಿದ ಕೊಪ್ಪಳದ ಕೇಂದ್ರಿಯ ವಿದ್ಯಾಲಯದ ವಿದ್ಯಾರ್ಥಿಗಳಾದ ಮಲ್ಲೇಶ್ವರ್, ತೇಜಸ್ವಿನಿ, ಪ್ರಿಯಾಂಕಾ, ಇಂಚರಾ, ಕೀರ್ತಿ, ಅರ್ಪಿತಾ ಬೆಳ್ಳಿ ಪದಕ ಪಡೆದಿದ್ದರೆ, ಬಾಗಲಕೋಟೆಯ ಮಹಾಂತೇಶ್ ಚಿನ್ನ ಹಾಗೂ ಬೆಳ್ಳಿ ಪದಕ ಪಡೆದಿದ್ದಾರೆ.
ಉತ್ತರಕನ್ನಡದ ಕಾರವಾರದ ವಿರೇಂದ್ರ ನಾಯಕ್ ಹಾಗೂ ಬಾಗಲಕೋಟೆಯ ಅಭಿಷೇಕ್ ರಾಠೋಡ ತಲಾ ಎರಡೆರೆಡು ಚಿನ್ನದ ಪದಕ ಪಡೆದಿದ್ದಾರೆ. ಇವರಿಗೆ ಟೀಮ್ ಮ್ಯಾನೇಜರ್ ರೇಣುಕಾ ಸಾಥ್ ನೀಡಿದ್ದು ವಿಶೇಷವಾಗಿದೆ. ಅಂತರಾಷ್ಟ್ರೀಯ ಮಟ್ಟದಲ್ಲಿ ವಿದ್ಯಾರ್ಥಿಗಳು ಭಾಗವಹಿಸಿಸುವುದಕ್ಕೆ ಪ್ರೋತ್ಸಾಹ ಹಾಗೂ ತರಬೇತಿ ಬೇಕಾಗಿದೆ ಎಂದು ವಿದ್ಯಾರ್ಥಿಗಳು ಅಭಿಪ್ರಾಯ ಪಟ್ಟಿದ್ದಾರೆ.
Comments
Post a Comment