ಕಾಶ್ಮೀರ ಹತ್ಯಾಕಾಂಡ – ಮೂರು ಬೇಡಿಕೆಯನ್ನಿಟ್ಟು ಮರು ತನಿಖೆ ಕೋರಿ ಸುಪ್ರೀಂಗೆ ಅರ್ಜಿ ಸಲ್ಲಿಕೆ


ಕಾಶ್ಮೀರ ಹತ್ಯಾಕಾಂಡ – ಮೂರು ಬೇಡಿಕೆಯನ್ನಿಟ್ಟು ಮರು ತನಿಖೆ ಕೋರಿ ಸುಪ್ರೀಂಗೆ ಅರ್ಜಿ ಸಲ್ಲಿಕೆ

ನವದೆಹಲಿ: ಬಾಲಿವುಡ್ ಚಲನಚಿತ್ರ ‘ದಿ ಕಾಶ್ಮೀರ್ ಫೈಲ್ಸ್’ ಬಿಡುಗಡೆಯಾಗಿ ಭರ್ಜರಿ ಯಶಸ್ಸು ಕಾಣುತ್ತಿರುವ ಬೆನ್ನಲ್ಲೇ 1990ರಲ್ಲಿ ಕಾಶ್ಮೀರ ಪಂಡಿತರ ಹತ್ಯಾಕಾಂಡದ ಕುರಿತು ಮರು ತನಿಖೆ ನಡೆಸಬೇಕೆಂದು ಕೋರಿ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲಾಗಿದೆ.

ಕಾಶ್ಮೀರ ಪಂಡಿತರ ಸಂಘಟನೆ ʼರೂಟ್‌ ಇನ್‌ ಕಾಶ್ಮೀರ್‌ʼ ಸುಪ್ರೀಂ ಕೋರ್ಟ್‌ಗೆ ಕ್ಯುರೇಟಿವ್‌ ಅರ್ಜಿಯನ್ನು ಸಲ್ಲಿಸಿದೆ. ಈ ಮೂಲಕ 2017ರಲ್ಲಿ ವಜಾಗೊಂಡಿದ್ದ ಪ್ರಕರಣಕ್ಕೆ ಈಗ ಮರುಜೀವ ಬಂದಿದೆ.

ಕೇವಲ ಊಹೆಯ ಆಧಾರದಲ್ಲಿ ಆರಂಭಿಕ ಹಂತದಲ್ಲಿ ರಿಟ್ ಅರ್ಜಿಯನ್ನು ವಜಾಗೊಳಿಸಿರುವುದು ಸರಿಯಲ್ಲ. 2007 ರ ಜಪಾನಿ ಸಾಹೂ ವರ್ಸಸ್ ಚಂದ್ರ ಶೇಖರ್ ಮೊಹಂತಿ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ “ಅಪರಾಧ ಎಂದಿಗೂ ಸಾಯುವುದಿಲ್ಲ” ಎಂದು ಹೇಳಿದೆ. ಹೀಗಾಗಿ ಮತ್ತೊಮ್ಮೆ ಅರ್ಜಿಯನ್ನು ವಿಚಾರಣೆ ನಡೆಸಬೇಕು ಎಂದು ಮನವಿ ಮಾಡಿದೆ.

ಮೂರು ಬೇಡಿಕೆ:
ಅರ್ಜಿಯಲ್ಲಿ ಮೂರು ಬೇಡಿಕೆಯನ್ನು ಕೋರ್ಟ್‌ ಮುಂದೆ ಇರಿಸಲಾಗಿದೆ. ಈ ಹತ್ಯಾ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾಸೀನ್‌ ಮಲಿಕ್‌ ಮತ್ತು ಬಿಟ್ಟಾ ಕರಾಟೆಯನ್ನು ಮತ್ತೊಮ್ಮೆ ವಿಚಾರಣೆಗೆ ಒಳಪಡಿಸಬೇಕು. ಹತ್ಯಾಕಾಂಡದ ಸಂಪೂರ್ಣ ತನಿಖೆಯನ್ನು ಎನ್‌ಐಎಗೆ ಒಪ್ಪಿಸಬೇಕು. ಮೂರನೇಯದಾಗಿ ಈ ಘಟನೆಯ ತನಿಖೆಗೆ ಸ್ವತಂತ್ರ ತನಿಖಾ ಆಯೋಗವನ್ನು ರಚಿಸಲು ಆದೇಶ ನೀಡಬೇಕು ಎಂದು ಬೇಡಿಕೆ ಇಡಲಾಗಿದೆ.

ಅರ್ಜಿ ವಜಾಗೊಂಡಿತ್ತು:
1989-90ರಲ್ಲಿ ಕಣಿವೆಯಲ್ಲಿ ಉಗ್ರಗಾಮಿಗಳ ಅಟ್ಟಹಾಸ ಉತ್ತುಂಗದಲ್ಲಿದ್ದ ಸಮಯದಲ್ಲಿ ಕಾಶ್ಮೀರಿ ಪಂಡಿತರ ಹತ್ಯೆ, ಕೃತ್ಯದಲ್ಲಿ ಭಾಗಿಯಾಗಿದ್ದ ಪ್ರತ್ಯೇಕತಾವಾದಿ ನಾಯಕ ಯಾಸಿನ್ ಮಲಿಕ್ ಸೇರಿದಂತೆ ವಿವಿಧ ವ್ಯಕ್ತಿಗಳ ವಿರುದ್ಧ ತನಿಖೆ ನಡೆಸುವಂತೆ ಸಲ್ಲಿಸಲಾದ ಅರ್ಜಿಯನ್ನು 2019ರಲ್ಲಿ ಸುಪ್ರೀಂ ಕೋರ್ಟ್‌ ತಿರಸ್ಕರಿಸಿತ್ತು.

ಅಂದಿನ ಮುಖ್ಯ ನ್ಯಾಯಮೂರ್ತಿ ಜೆ ಎಸ್ ಖೇಹರ್ ಮತ್ತು ನ್ಯಾ. ಡಿ ವೈ ಚಂದ್ರಚೂಡ್ ಅವರ ಪೀಠ, ಪ್ರಕರಣ ನಡೆದು ಸುಮಾರು 27 ವರ್ಷಗಳು ಕಳೆದಿವೆ. ಕಣಿವೆಯಿಂದ ಕಾಶ್ಮೀರಿ ಪಂಡಿತರ ಸಾಮೂಹಿಕ ವಲಸೆಗೆ ಕಾರಣವಾದ ಕೊಲೆ, ಬೆಂಕಿ ಹಚ್ಚುವಿಕೆ ಮತ್ತು ಲೂಟಿ ಪ್ರಕರಣಗಳಲ್ಲಿ ಸಾಕ್ಷ್ಯಗಳನ್ನು ಸಂಗ್ರಹಿಸುವುದು ತುಂಬಾ ಕಷ್ಟ ಎಂದು ಹೇಳಿ ಅರ್ಜಿಯನ್ನು ವಜಾ ಮಾಡಿತ್ತು. 27 ವರ್ಷದವರೆಗೆ ನೀವು ಸುಮ್ಮನಿದ್ದೀರಿ. ಈಗ ಸಾಕ್ಷ್ಯವು ಎಲ್ಲಿಂದ ಬರುತ್ತದೆ ಎಂದು ನಮಗೆ ತಿಳಿಸಿ ಎಂದು ಪೀಠ ಅರ್ಜಿದಾರರನ್ನು ಖಾರವಾಗಿ ಪ್ರಶ್ನಿಸಿತ್ತು.

ರಾಷ್ಟ್ರಪತಿಗಳಿಗೆ ಪತ್ರ:
1990ರಲ್ಲಿ ಕಾಶ್ಮೀರಿ ಪಂಡಿತರ ಹತ್ಯಾಕಾಂಡಕ್ಕೆ ಸಂಬಂಧಿಸಿದಂತೆ ಪ್ರಕರಣ ತೆರೆದು ವಿಶೇಷ ತನಿಖಾ ತಂಡದಿಂದ(ಎಸ್‌ಐಟಿ) ತನಿಖೆ ನಡೆಸಲು ನಿರ್ದೇಶನ ನೀಡುವಂತೆ ಕೋರಿ ವಕೀಲ ಮತ್ತು ಸಾಮಾಜಿಕ ಕಾರ್ಯಕರ್ತ ವಿನೀತ್ ಜಿಂದಾಲ್ ರಾಮನಾಥ್‌ ಕೋವಿಂದ್‌ ಅವರಿಗೆ ಪತ್ರ ಬರೆದಿದ್ದಾರೆ. 33 ವರ್ಷಗಳ ಹಿಂದೆ ನಡೆದ ಸಿಖ್ ವಿರೋಧಿ ಗಲಭೆಗೆ ಸಂಬಂಧಿಸಿದ ವಿಷಯಗಳ ಮರು ತನಿಖೆ ನಡೆಸಬಹುದಾದರೆ, 27 ವರ್ಷಗಳ ಹಿಂದೆ ನಡೆದ ಕಾಶ್ಮೀರಿ ಪಂಡಿತರ ಪ್ರಕರಣಗಳನ್ನೂ ಸಹ ಮತ್ತೆ ತನಿಖೆ ನಡೆಸಬಹುದು ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಘಟನೆಯ ಸಂತ್ರಸ್ತರು, ದೈಹಿಕ, ಭಾವನಾತ್ಮಕ ಮತ್ತು ಮಾನಸಿಕ ಆಘಾತದ ಸ್ಥಿತಿಯಲ್ಲಿದ್ದಾರೆ. ಕಳೆದ ಹಲವು ವರ್ಷಗಳಿಂದ ತಮ್ಮ ಜೀವನೋಪಾಯಕ್ಕಾಗಿ ಹೆಣಗಾಡುತ್ತಿದ್ದರಿಂದ ಅವರು ತಮಗೆ ಆಗಿರುವ ಅನ್ಯಾಯಗಳ ಬಗ್ಗೆ ದೂರುಗಳನ್ನು ದಾಖಲಿಸಿಕೊಳ್ಳುವ ಸ್ಥಿತಿಯಲ್ಲಿರಲಿಲ್ಲ. ಹೀಗಾಗಿ ಈಗ ಅವರ ಹೇಳಿಕೆಗಳನ್ನು ದಾಖಲಿಸಿ ನ್ಯಾಯ ನೀಡಬೇಕೆಂದು ಮನವಿ ಮಾಡಿದ್ದಾರೆ.

ಮಾರ್ಚ್ 11 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ದಿ ಕಾಶ್ಮೀರ್‌ ಫೈಲ್ಸ್‌ ಚಿತ್ರವನ್ನು ವಿವೇಕ್ ಅಗ್ನಿಹೋತ್ರಿ ನಿರ್ದೇಶಿಸಿದ್ದು, ಅನುಪಮ್ ಖೇರ್, ಮಿಥುನ್ ಚಕ್ರವರ್ತಿ, ಪಲ್ಲವಿ ಜೋಶಿ, ದರ್ಶನ್ ಕುಮಾರ್ ಮತ್ತು ಇತರರು ನಟಿಸಿದ್ದಾರೆ. 200 ಕೋಟಿಗೂ ಹೆಚ್ಚು ಹಣವನ್ನು ಸಿನಿಮಾ ಗಳಿಕೆ ಮಾಡಿದ್ದು ಕೋವಿಡ್‌ ನಂತರ ಅತಿ ಹೆಚ್ಚು ಹಣ ಸಂಗ್ರಹವಾದ ಬಾಲಿವುಡ್‌ ಫಿಲ್ಮ್‌ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

Comments

Popular posts from this blog

ಸಾರ್ವಜನಿಕ ಶೌಚಾಲಯ ಕದ್ದು, 45 ಸಾವಿರ ರೂ.ಗೆ ಮಾರಿದ ಕಿರಾತಕ

60 ಅಡಿ ಬಾವಿ ತೋಡಿದ ಚಿಕ್ಕಮಗಳೂರಿನ ಭಗೀರಥ ದಂಪತಿ

ಬ್ರಾಂಡ್ ವ್ಯಾಲ್ಯೂ ಕಡಿಮೆಯಾದರೂ ಕೊಹ್ಲಿ ನಂ.1 – ಯಾರ ಮೌಲ್ಯ ಎಷ್ಟು