ಕರ್ನಾಟಕ ಬಂದ್ ಮಾಡಿದ್ದಕ್ಕೆ ಕಟ್ಟಡ ಒಡೆಸಿದ್ರು- ಎಸ್‍ಡಿಪಿಐ ಜಿಲ್ಲಾಧ್ಯಕ್ಷ ನಜೀರ್
ಕರ್ನಾಟಕ ಬಂದ್ ಮಾಡಿದ್ದಕ್ಕೆ ಕಟ್ಟಡ ಒಡೆಸಿದ್ರು- ಎಸ್‍ಡಿಪಿಐ ಜಿಲ್ಲಾಧ್ಯಕ್ಷ ನಜೀರ್
ಉಡುಪಿ: ಹಿಜಬ್ ಹೋರಾಟದಲ್ಲಿ ವಿದ್ಯಾರ್ಥಿನಿಯರನ್ನು ಬೆಂಬಲಿಸಿದ್ದಕ್ಕೆ ನಮ್ಮ ಅಂಗಡಿಯನ್ನು ತೆರವು ಮಾಡಿದ್ದಾರೆ. ಸಂವಿಧಾನ ಬದ್ಧ ಹೋರಾಟವನ್ನು ಮುಂದೆಯೂ ಬೆಂಬಲಿಸುವುದಾಗಿ ಉಡುಪಿ ಎಸ್‍ಡಿಪಿಐ ಜಿಲ್ಲಾಧ್ಯಕ್ಷ ನಜೀರ್ ಅಹಮ್ಮದ್ ಹೇಳಿದ್ದಾರೆ.
ಪಬ್ಲಿಕ್ ಟಿವಿ ಜೊತೆ ಮಾತನಾಡಿದ ನಜೀರ್, ಅಂಗಡಿ ತೆರವುಗೊಳಿಸಿರಬಹುದು ನಮ್ಮ ಹೋರಾಟ ಮುಚ್ಚಿಸಲು ಸಾಧ್ಯವಿಲ್ಲ. ನಮ್ಮನ್ನು ಹದ್ದುಬಸ್ತಿನಲ್ಲಿಡುವ ವ್ಯವಸ್ಥೆಯಾಗುತ್ತಿದೆ. ಬಿಜೆಪಿಯ ವಿರುದ್ಧ ಹೋದದ್ದಕ್ಕೆ ಅಂಗಡಿ ತೆರವು ಮಾಡಿದ್ದಾರೆ. ಕರ್ನಾಟಕ ಬಂದ್ ಇವರ ನಿದ್ದೆಗೆಡಿಸಿರಬೇಕು. ನಿರಂತರ ಬಂದ್ ಮಾಡಿಸುವ ಪ್ಲ್ಯಾನ್ ಇರಬಹುದು ಎಂದರು.
ತಿಂಗಳಿಗೆ 2 ಲಕ್ಷ ರುಪಾಯಿ ಬಾಡಿಗೆಯನ್ನು ಮಸೀದಿಗೆ ಕೊಡುತ್ತಿದ್ದೆವು. ಸರ್ಕಾರಕ್ಕೆ 37 ಸಾವಿರ ರುಪಾಯಿ ಜಿಎಸ್‍ಟಿ ಕಟ್ಟುತ್ತಿದ್ದೆವು. ಪರವಾನಿಗೆ ಪಡೆಯಲು ಕಡತಗಳಿಗೆ ಹಣ ಖರ್ಚು ಮಾಡಿದ್ದೇವೆ. ಹಿಜಬ್ ಹೋರಾಟದಲ್ಲಿ ಮಕ್ಕಳಿಗೆ ಸಂವಿಧಾನಬದ್ಧ ಹಕ್ಕು ಸಿಗಲೇಬೇಕು. ನಾವಾಗಿಯೇ ವಿವಾದ ಸೃಷ್ಟಿ ಮಾಡಿಲ್ಲ. ಸಂವಿಧಾನಬದ್ಧ ಹಕ್ಕು ಒದಗಿಸಲು ನಾವು ಸಹಾಯ ಮಾಡಿಯೇ ಮಾಡುತ್ತೇವೆ. ನಗರಸಭೆ ಅಧಿಕಾರಿಗಳಿಗೆ ಬಿಜೆಪಿಯವರ ಒತ್ತಡ ಇದೆ. ನಗರಸಭೆಯ ಸಭೆಯಲ್ಲಿ ಈ ಬಗ್ಗೆ ಚರ್ಚೆಯಾಗಿದೆ ಎಂದು ಬೇಸರ ಹೊರ ಹಾಕಿದ್ದಾರೆ.
ಉಡುಪಿಯಲ್ಲಿ ಹಲವಾರು ಅಕ್ರಮ ಕಟ್ಟಡಗಳು ಇವೆ. ಎಲ್ಲಾ ಕಟ್ಟಡಗಳನ್ನು ತರವು ಮಾಡುತ್ತಾರಾ? ನ್ಯಾಯ ಅಂತ ಹೇಳಿದ ಮೇಲೆ ಎಲ್ಲರಿಗೂ ಒಂದೇ ಕಾನೂನು ಜಾರಿಯಾಗಬೇಕು. ಒಂದು ಅಂಗಡಿಗೆ ಡೋರ್ ನಂಬರ್ ಇದೆ ಇನ್ನೊಂದಕ್ಕೆ ಇಲ್ಲ. ಅಂಗಡಿ ಪರವಾನಿಗೆಗೆ ನಾವು ಓಡಾಡುತ್ತಿದ್ದೆವು ಎಂದು ಹೇಳಿದರು.
ಉಡುಪಿಯ ನಗರಸಭೆ ಅಧಿಕಾರಿಗಳು ಅಕ್ರಮ ಕಟ್ಟಡಗಳ ಮೇಲೆ ದಾಳಿ ಮಾಡಿದ್ದಾರೆ. ಎಸ್‍ಡಿಪಿಐ ಜಿಲ್ಲಾಧ್ಯಕ್ಷ ನಜೀರ್ ಅವರಿಗೆ ಸೇರಿದ ಝರಾ ಹೋಟೆಲ್ ತೆರವು ಕಾರ್ಯಾಚರಣೆ ನಡೆಯುತ್ತಿದೆ. ಹೆಚ್ಚುವರಿ ಪೊಲೀಸ್ ಬಂದೋಬಸ್ತ್ ಜೊತೆ ಮಸೀದಿ ರಸ್ತೆಗೆ ಆಗಮಿಸಿದ ನಗರಸಭೆ ಅಧಿಕಾರಿಗಳು, ಸ್ಟೇ ಆರ್ಡರ್ ತೆರವಾಗಿರುವ ಆದೇಶವನ್ನು ಪ್ರದರ್ಶನ ಮಾಡಿದರು.
ಕೆಎಸ್‍ಆರ್‍ಪಿ ಪೊಲೀಸ್ ತುಕಡಿ ಸ್ಥಳದಲ್ಲಿ ಮೊಕ್ಕಾಂ ಹೂಡಿಸಲಾಗಿದೆ. ಉಡುಪಿ ನಗರದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಇನ್ಸ್‍ಪೆಕ್ಟರ್ ಪ್ರಮೋದ್ ಮುನ್ನೆಚ್ಚರಿಕಾ ಕ್ರಮವಾಗಿ ಸ್ಥಳದಲ್ಲಿದ್ದಾರೆ.
Comments
Post a Comment