ರಷ್ಯಾದ ಪಡೆಯಿಂದ ಕಿಡ್ನಾಪ್ ಆಗಿದ್ದ ಮೇಯರ್ ಬಿಡುಗಡೆ
ರಷ್ಯಾದ ಪಡೆಯಿಂದ ಕಿಡ್ನಾಪ್ ಆಗಿದ್ದ ಮೇಯರ್ ಬಿಡುಗಡೆ
ಕೀವ್: ಕಳೆದ ವಾರ ರಷ್ಯಾ ಪಡೆಯಿಂದ ಕಿಡ್ನಾಪ್ ಆಗಿದ್ದ ಉಕ್ರೇನ್‍ನ ಮೆಲಿಟೊಪೋಲ್‌ನ ಮೇಯರ್ ಇವಾನ್ ಫೆಡೋರೊವ್ ಅವರು ಬಿಡುಗಡೆಗೊಂಡಿದ್ದಾರೆ.
ಈ ಬಗ್ಗೆ ಉಕ್ರೇನ್‍ನ ರಕ್ಷಣಾ ಸಚಿವಾಲಯ ಅಧಿಕೃತವಾದ ಮಾಹಿತಿ ಹಂಚಿಕೊಂಡಿದ್ದು, ಅಧ್ಯಕ್ಷ ವೊಲೊಡಿಮಿರ್ ಝೆಲೇನ್ಸ್ಕಿ ಅವರು ಮೆಲಿಟೊಪೋಲ್‍ನ ಮೇಯರ್‍ನೊಂದಿಗೆ ಮಾತನಾಡುತ್ತಿರುವ ತುಣುಕನ್ನು ಬಿಡುಗಡೆ ಮಾಡಿದೆ.
ಈ ವೀಡಿಯೋದಲ್ಲಿ ಮೇಯರ್ ಅವರು ಝೆಲೆನ್ಸ್ಕಿಗೆ ಧನ್ಯವಾದ ತಿಳಿಸುತ್ತಾರೆ. ಅದಕ್ಕೆ ಪ್ರತಿಕ್ರಿಯಿಸಿದ ಝೆಲೆನ್ಸ್ಕಿ ನಾವು ನಮ್ಮವರನ್ನು ಬಿಟ್ಟುಕೊಡುವುದಿಲ್ಲ ಎಂದು ಉತ್ತರಿಸಿದ್ದಾರೆ. ಮೇಯರ್‌ನ್ನು ಬಿಡುಗಡೆಗೊಳಿಸಲು ಉಕ್ರೇನ್ ರಷ್ಯಾದ 9 ಸೈನಿಕರನ್ನು ಹಸ್ತಾಂತರಿಸಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಫೆಡೋರೊವ್‍ನ್ನು ಕಳೆದ ವಾರ ರಷ್ಯಾ ಪಡೆಗಳು ಕಿಡ್ನಾಪ್ ಮಾಡಿದ್ದರು. ಫೆಡೋರೊವ್ ಅವರನ್ನು ಬಿಡುಗಡೆ ಮಾಡಲಾಗಿದೆ ಎಂದು ಝೆಲೆನ್ಸ್ಕಿಯ ಕಚೇರಿ ಈ ಹಿಂದೆ ಹೇಳಿತ್ತು ಆದರೆ ಯಾವುದೇ ವಿವರಗಳನ್ನು ನೀಡಿಲ್ಲ. ಫೆಡೋರೊವ್ ಅವರನ್ನು ಮಾರ್ಚ್ 11 ರಂದು ರಷ್ಯಾದ ಪಡೆಗಳು ಅಪಹರಿಸಿದ್ದವು. 10 ಆಕ್ರಮಿತರ ಗುಂಪು ಮೆಲಿಟೊಪೋಲ್‌ನ ಮೇಯರ್ ಇವಾನ್ ಫೆಡೋರೊವ್ ಅವರನ್ನು ಅಪಹರಿಸಿದೆ ಎಂದು ಉಕ್ರೇನ್ ಸಂಸತ್ ಟ್ವಿಟ್ಟರ್‌ನಲ್ಲಿ ತಿಳಿಸಿತ್ತು.
ಮೇಯರ್ ಅವರು ನಗರದ ಬಿಕ್ಕಟ್ಟಿನ ಕೇಂದ್ರದಲ್ಲಿ ಮೂಲಸೌಕರ್ಯ ಪೂರೈಕೆಯಲ್ಲಿನ ಸಮಸ್ಯೆಗಳ ಬಗ್ಗೆ ವ್ಯವಹರಿಸುತ್ತಿದ್ದಾಗ ವಶಪಡಿಸಿಕೊಳ್ಳಲಾಗಿದೆ ಎಂದು ಹೇಳಿದೆ. ಶುಕ್ರವಾರ ತಡರಾತ್ರಿ ವೀಡಿಯೋ ಸಂದೇಶವೊಂದರಲ್ಲಿ ಝೆಲೆನ್‍ಸ್ಕಿ ಅಪಹರಣವನ್ನು ದೃಢಪಡಿಸಿದ್ದಾರೆ.
Comments
Post a Comment