ಬೆಂಗಳೂರಿನಲ್ಲಿ ಹಿಜಬ್‍ಗಾಗಿ ಪ್ರತಿಭಟನೆ – ಪೊಲೀಸರಿಂದ ಕಾನೂನು ಕ್ರಮದ ಎಚ್ಚರಿಕೆ
ಬೆಂಗಳೂರಿನಲ್ಲಿ ಹಿಜಬ್‍ಗಾಗಿ ಪ್ರತಿಭಟನೆ – ಪೊಲೀಸರಿಂದ ಕಾನೂನು ಕ್ರಮದ ಎಚ್ಚರಿಕೆ
ಬೆಂಗಳೂರು: ಮುಂದಿನ ವಾರದಿಂದ ಪರೀಕ್ಷೆಗಳು ಆರಂಭವಾಗುತ್ತಿರುವ ಬೆನ್ನಲ್ಲೇ ಹಿಜಬ್ ಧರಿಸಲು ಅನುಮತಿ ನೀಡುವಂತೆ ಕೋರಿ ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸಲು ವಿದ್ಯಾರ್ಥಿನಿಯರು ಮುಂದಾಗಿದ್ದಾರೆ.
ಈಗಾಗಲೇ ಉಡುಪಿಯ ವಿದ್ಯಾರ್ಥಿನಿಯರು ಬೆಂಗಳೂರಿಗೆ ಆಗಮಿಸಿದ್ದಾರೆ. ವಿದ್ಯಾರ್ಥಿನಿಯರ ಪರವಾಗಿ ಮಹಿಳಾ ಸಂಘಟನೆ ಶುಕ್ರವಾರ ಬೆಳಗ್ಗೆ ಫ್ರೀಡಂ ಪಾರ್ಕ್‍ನಲ್ಲಿ ಪ್ರತಿಭಟನೆಗೆ ಅನುಮತಿ ನೀಡುವಂತೆ ಕೋರಿ ಪೊಲೀಸರ ಬಳಿ ಮನವಿ ಮಾಡಿದ್ದಾರೆ. ಆದರೆ ಪ್ರತಿಭಟನೆಗೆ ಪೊಲೀಸರು ಒಪ್ಪಿಗೆ ಸೂಚಿಸಿಲ್ಲ. ಜೊತೆಗೆ ಪ್ರತಿಭಟಿಸಿದರೆ ಕಾನೂನು ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಖಡಕ್ ಆಗಿ ಹೇಳಿದ್ದಾರೆ.
ಪೊಲೀಸರು ಅನುಮತಿ ನೀಡದಿದ್ದರೂ ಸಾಮಾಜಿಕ ಜಾಲತಾಣದಲ್ಲಿ ಫ್ರೀಡಂಪಾರ್ಕ್ ನಲ್ಲಿ ಸಂಜೆ 4 ಗಂಟೆಗೆ ಪ್ರತಿಭಟನೆಯಿದೆ ಎನ್ನುವುದರ ಕುರಿತು ಮೆಸೇಜ್ ಹರಿದಾಡುತ್ತಿದೆ. ಜೊತೆಗೆ ಅನುಮತಿ ನೀಡದ ಹಿನ್ನೆಲೆಯಲ್ಲಿ ಬೆಂಗಳೂರಿನ ಅಲ್ಲಲ್ಲಿ ಪ್ರತಿಭಟನೆ ನಡೆಯುವ ಸಾಧ್ಯತೆಯಿದೆ. ಇದರಿಂದಾಗಿ ಬೆಂಗಳೂರು ಪೊಲೀಸರು ಹೈ ಅಲರ್ಟ್ ಆಗಿದ್ದಾರೆ.
ಅನುಮತಿ ನೀಡಿಲ್ಲ ಯಾಕೆ?: ಪ್ರತಿಭಟನೆ ನಡೆಸಬೇಕಾದರೆ 5 ದಿನ ಮುಂಚಿತವಾಗಿ ಅರ್ಜಿ ಸಲ್ಲಿಸಬೇಕು. ನಿನ್ನೆ ಬೆಳಗ್ಗೆ ಅರ್ಜಿ ಸಲ್ಲಿಸಿ ಪ್ರತಿಭಟನೆಗೆ ಒಂದೇ ದಿನಕ್ಕೆ ಅವಕಾಶ ಕೇಳಲಾಗಿದೆ. ಈ ಹಿನ್ನೆಲೆಯಲ್ಲಿ ಯಾವುದೇ ಕಾರಣಕ್ಕೂ ಪ್ರತಿಭಟನೆಗೆ ಅವಕಾಶ ಇಲ್ಲ. ಹಾಗೇನಾದರೂ ಪ್ರತಿಭಟನೆ ನಡೆಸಿದರೆ ಕಾನೂನು ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಪೊಲೀಸರು ಎಚ್ಚರಿಕೆ ನೀಡಿದ್ದಾರೆ.
ಪೊಲೀಸ್ ಅಧಿಕಾರಿಯೊಬ್ಬರು ಪಬ್ಲಿಕ್ ಟಿವಿಗೆ ಪ್ರತಿಕ್ರಿಯಿಸಿ, ವಿದ್ಯಾರ್ಥಿಗಳ ಪ್ರತಿಭಟನೆಗೆ ಯಾವುದೇ ಅನುಮತಿ ಕೊಟ್ಟಿಲ್ಲ. ಅನುಮತಿ ಸಿಕ್ಕ ನಂತರವಷ್ಟೇ ಫ್ರೀಡಂ ಪಾರ್ಕ್‍ನಲ್ಲಿ ಪ್ರತಿಭಟನೆ ನಡೆಸಬಹುದು. ಆದರೆ ಅನುಮತಿ ಸಿಕ್ಕಿಲ್ಲದ ಕಾರಣ, ಯಾರಿಗೂ ಅವಕಾಶ ಇಲ್ಲ. ವಿದ್ಯಾರ್ಥಿಗಳ ಜೊತೆಗೆ ಕೆಲ ಸಂಘಟನೆಗಳು ಕೈಜೋಡಿಸುವ ಶಂಕೆ ಇದೆ. ಹಾಗೇನಾದರೂ ಪ್ರತಿಭಟನೆಗೆ ಮುಂದಾದರೆ ಅವರನ್ನು ಬಂಧಿಸಿ ಕಾನೂನು ಪ್ರಕಾರ ಕಠಿಣ ಕ್ರಮ ಕೈಗೊಳ್ಳುತ್ತೇವೆ ಎಂದು ತಿಳಿಸಿದ್ದಾರೆ.
ವಿದ್ಯಾರ್ಥಿಗಳು ಮಾತ್ರ ಧಿಡೀರ್ ಪ್ರತಿಭಟನೆ ಮಾಡುವ ಸಾಧ್ಯತೆಯಿದ್ದು, ಸಿಎಂ ಮನೆ, ಗೃಹ ಸಚಿವರ ಮನೆ, ಫ್ರೀಡಂ ಪಾರ್ಕ್, ಟೌನ್ ಹಾಲ್ ಬಳಿ ಪ್ರತಿಭಟನೆ ಸಾಧ್ಯತೆಯಿದೆ. ಅಜ್ಞಾತ ಸ್ಥಳದಲ್ಲಿ ವಿದ್ಯಾರ್ಥಿಗಳ ಜೊತೆಗೆ ಸಮುದಾಯದ ಮುಖಂಡರು ಸಭೆ ನಡೆಸಿದ್ದಾರೆ. ಸಭೆ ಬಳಿಕ ಪ್ರತಿಭಟನೆ ಮಾಡುವ ಸಾಧ್ಯತೆಯಿದೆ.
Comments
Post a Comment