ಮರಿ ಜೊತೆ ಇದ್ದ ಆನೆ ಮೇಲೆ ಜೆಸಿಬಿ ಹರಿಸಲು ಮುಂದಾದ ಚಾಲಕ – ಸಾರ್ವಜನಿಕರಿಂದ ಆಕ್ರೋಶ
ಮರಿ ಜೊತೆ ಇದ್ದ ಆನೆ ಮೇಲೆ ಜೆಸಿಬಿ ಹರಿಸಲು ಮುಂದಾದ ಚಾಲಕ – ಸಾರ್ವಜನಿಕರಿಂದ ಆಕ್ರೋಶ

ಚಿಕ್ಕಮಗಳೂರು: ಅರಣ್ಯ ಪ್ರದೇಶದಲ್ಲಿ ಮರಿ ಜೊತೆ ಇದ್ದ ಆನೆ ಮೇಲೆ ಜೆಸಿಬಿ ಚಾಲಕ ಜೆಸಿಬಿಯಲ್ಲಿ ಹೆದರಿಸಿ ಹಿಂದೆ ಓಡಿಸಿರುವ ಘಟನೆ ಜಿಲ್ಲೆಯ ತಣಿಗೇಬೈಲು ಅರಣ್ಯ ಪ್ರದೇಶದಲ್ಲಿ ನಡೆದಿದೆ.
ಅರಣ್ಯಪ್ರದೇಶದಲ್ಲಿ ಸ್ವಚ್ಛಂದವಾಗಿ ವಿಹರಿಸುತ್ತಿದ್ದ ಮೂಕಪ್ರಾಣಿಗಳ ಮೇಲೆ ಜೆಸಿಬಿಯಲ್ಲಿ ದೌರ್ಜನ್ಯ ಎಸಗಿದ ಜೆಸಿಬಿ ಸಿಬ್ಬಂದಿಯೇ ಅದನ್ನು ವೀಡಿಯೋ ಮಾಡಿ ವಿಕೃತಿ ಮೆರೆದಿದ್ದಾರೆ. ಇದೀಗ ವೀಡಿಯೋ ವೈರಲ್ ಆಗಿದ್ದು ತೀವ್ರ ಚರ್ಚೆಗೆ ಗ್ರಾಸವಾಗಿದೆ. ಅಭಯಾರಣ್ಯದಲ್ಲಿ ಯಂತ್ರಗಳ ಮೂಲಕ ಕೆಲಸ ಮಾಡುವುದಕ್ಕೆ ಆರಂಭದಿಂದಲೂ ಇಲಾಖೆ ಮೇಲೆ ಅಸಮಾಧಾನವಿದೆ. ಈ ಮಧ್ಯೆ ಅರಣ್ಯದಲ್ಲಿನ ರಸ್ತೆಯನ್ನು ಅಭಿವೃದ್ದಿಪಡಿಸಲು ಖಾಸಗಿ ವ್ಯಕ್ತಿಗಳಿಗೆ ಟೆಂಡರ್ ಮೂಲಕ ಕೆಲಸವನ್ನು ನೀಡಲಾಗಿದೆ.
ಗುತ್ತಿಗೆದಾರರು ಅಭಯಾರಣ್ಯದೊಳಗೆ ಜೆಸಿಬಿಯನ್ನು ಬಳಸಿ ರಸ್ತೆ ಅಭಿವೃದ್ಧಿಪಡಿಸುತ್ತಿರುವುದು ಕೂಡ ಪರಿಸರವಾದಿಗಳ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ತಣಿಗೇಬೈಲು ಪ್ರದೇಶದಲ್ಲಿ ರಸ್ತೆಯನ್ನು ಅಭಿವೃದ್ಧಿ ಕಾಮಗಾರಿ ನಡೆಯುವ ವೇಳೆ ಕಾಡಾನೆಗಳ ಹಿಂಡು ಎದುರಾಗಿದೆ. ಈ ವೇಳೆ ವನ್ಯಜೀವಿಗಳ ಸುಗಮ ಸಂಚಾರಕ್ಕೆ ಅವಕಾಶ ನೀಡದೆ. ಮೂಕಪ್ರಾಣಿಗಳಿಗೆ ಜೆಸಿಬಿಯಿಂದ ಹೆದರಿಸಿರುವುದು ತೀವ್ರ ಚರ್ಚೆಗೆ ಗ್ರಾಸವಾಗಿದೆ.
ಜೆಸಿಬಿಯನ್ನು ಕಂಡ ಕಾಡಾನೆ ತನ್ನ ಮರಿಯ ರಕ್ಷಣೆಗೆ ಮುಂದಾಗಿದ್ದು, ಈ ವೇಳೆ ಜೆಸಿಬಿ ಚಾಲಕ ಆನೆಗೆ ಜೆಸಿಬಿಯಿಂದ ಹೆದರಿಸಿದ್ದಾನೆ. ಮರಿ ಇದ್ದ ಕಾರಣ ಆನೆ ಕೂಡ ಜೆಸಿಬಿಗೆ ಬೆದರಿ ಹಿಂದೆ ಹೋಗಿದೆ. ಅರಣ್ಯದಲ್ಲಿ ಮೂಕಪ್ರಾಣಿಗಳ ಮೇಲೆ ಹೀಗೆ ಯಂತ್ರಗಳಿಂದ ದೌರ್ಜನ್ಯ ಎಸಗಿ ವೀಡಿಯೋ ಮಾಡಿ ವಿಕೃತಿ ಮೆರೆದಿರೋದು ಜೆಸಿಬಿ ಚಾಲಕನ ವಿರುದ್ಧ ಸಾರ್ವಜನಿಕರು, ಪರಿಸರವಾದಿಗಳು ತೀವ್ರ ಆಕ್ರೋಶ ಹೊರಹಾಕಿದ್ದು, ತಡವಾಗಿ ಎಚ್ಚೆತ್ತ ಅರಣ್ಯ ಇಲಾಖೆ ಜೆಸಿಬಿ ಚಾಲಕನ ಮೇಲೆ ಪ್ರಕರಣ ದಾಖಲಿಸಿದ್ದಾರೆ.
ಅಭಯಾರಣ್ಯದೊಳಗೆ ವನ್ಯಜೀವಿಗಳು ಮುಕ್ತವಾಗಿ ಸಂಚರಿಸಲು ಅವಕಾಶ ಇರಬೇಕು. ಅವುಗಳಿಗೆ ಯಾವುದೇ ತೊಂದರೆಯಾಗಬಾರದು. ಈ ನಿಟ್ಟಿನಲ್ಲಿ ಅಭಯಾರಣ್ಯದ ವ್ಯಾಪ್ತಿಯೊಳಗೆ ಯಾವುದೇ ಕೆಲಸ ಮಾಡುವಾಗ ಅರಣ್ಯ ಇಲಾಖೆ ಸಾಕಷ್ಟು ಮುನ್ನೆಚ್ಚರಿಕಾ ಕ್ರಮಗಳನ್ನ ಕೈಗೊಳ್ಳಬೇಕು. ಅರಣ್ಯದಲ್ಲಿ ಜೆಸಿಬಿ ಸೇರಿದಂತೆ ಯಂತ್ರಗಳ ಬಳಕೆಯನ್ನು ಆದಷ್ಟು ಕಡಿಮೆ ಮಾಡಿ ಕಾರ್ಮಿಕರಿಂದಲೇ ಕೆಲಸ ಮಾಡಿಸಲು ಅರಣ್ಯ ಇಲಾಖೆ ಮುಂದಾಗಬೇಕೆಂದು ಜನಸಾಮಾನ್ಯರು ಹಾಗೂ ಪರಿಸರವಾದಿಗಳು ಆಗ್ರಹಿಸಿದ್ದಾರೆ.
Comments
Post a Comment