ಮದಗಜ ಚಿತ್ರ ಖ್ಯಾತಿಯ ನಿರ್ದೇಶಕ ಮಹೇಶ್ ಕಂಡಂತೆ ‘ಜೇಮ್ಸ್’ ಸಿನಿಮಾ: ಸೆಲೆಬ್ರಿಟಿ ಫಸ್ಟ್ ರಿವ್ಯೂ


ಮದಗಜ ಚಿತ್ರ ಖ್ಯಾತಿಯ ನಿರ್ದೇಶಕ ಮಹೇಶ್ ಕಂಡಂತೆ ‘ಜೇಮ್ಸ್’ ಸಿನಿಮಾ: ಸೆಲೆಬ್ರಿಟಿ ಫಸ್ಟ್ ರಿವ್ಯೂ 




ಸಿನಿಮಾ ನೋಡೋಕೆ ಹೋದಾಗ ಯಾವತ್ತೂ ನಾನು ಸಂಕಟದಿಂದ ಚಿತ್ರಮಂದಿರಕ್ಕೆ ಹೆಜ್ಜೆ ಇಟ್ಟವನು ಅಲ್ಲ. ಪುನೀತ್ ರಾಜ್ ಕುಮಾರ್ ಅವರ ‘ಜೇಮ್ಸ್’ ಚಿತ್ರಕ್ಕೆ ಹೋಗುವಾಗ ಅಂಥದ್ದೊಂದು ಸಂಕಟವಿತ್ತು. ಸಿನಿಮಾ ನೋಡುವ ಕುತೂಹಲದ ಜತೆಗೆ ನಾನು ತೆರೆಯ ಮೇಲೆ ಅಪ್ಪು ಸರ್ ನ ನೋಡೋಕೆ ಸಾಧ್ಯವಾ? ಅದು ನನ್ನಿಂದ ಆಗತ್ತಾ ಅನ್ನುವ ನೋವಿತ್ತು. ಆ ಒದ್ದಾಟದಲ್ಲೇ ಥಿಯೇಟರ್ ಗೆ ಹೋದೆ. 

ಸಿನಿಮಾ ಶುರುವಾಗುತ್ತಿದ್ದಂತೆಯೇ ‘ಜೇಮ್ಸ್’ ಅಂತ ಟೈಟಲ್ ಬಂತು. ಎದೆ ಬಡಿತ ಜೋರಾಯಿತು. ಕಾರ್ ಚೇಸ್ ಮಾಡಿಕೊಂಡು ಅಪ್ಪು ಸರ್ ಬರುವಾಗ ಎದ್ದೇ ನಿಂತುಕೊಂಡು ಬಿಟ್ಟೆ. ಆ ರೀತಿಯಲ್ಲಿ ಅಪ್ಪು ಸರ್ ಪಾತ್ರವನ್ನು ಎಂಟ್ರಿ ಕೊಡಿಸಿದ್ದಾರೆ ನಿರ್ದೇಶಕ ಚೇತನ್ ಕುಮಾರ್. ಇದೊಂದು ದೇಶಾಭಿಮಾನ ಇಟ್ಟುಕೊಂಡ ನಾಯಕನ ಕುರಿತಾದ ಚಿತ್ರ. ಅಪ್ಪು ಈವರೆಗೂ ನಾನಾ ರೀತಿಯ ಚಿತ್ರಗಳನ್ನು ಮಾಡಿದ್ದಾರೆ. ಆದರೆ, ಈ ಜಾನರ್ ನ ಚಿತ್ರದಲ್ಲಿ ಅವರು ನಟಿಸಿರಲಿಲ್ಲ. ಆ ಕೊರತೆಯನ್ನು ನೀಗಿಸಿದಂತಹ ಚಿತ್ರ ಇದಾಗಿದೆ. 

ಸೆಕ್ಯುರಿಟಿ ಏಜೆನ್ಸ್, ಡ್ರಗ್ಸ್ ಮಾಫಿಯಾ, ದೇಶಪ್ರೇಮ, ಗೆಳೆತನ ಹೀಗೆ ಹಲವು ಕವಲುಗಳ ಕಥೆ ಸಿನಿಮಾದಲ್ಲಿದ್ದರೂ, ಅಷ್ಟಕ್ಕೂ ಗೆಲ್ಲುವುದು ಪುನೀತ್ ರಾಜ್ ಕುಮಾರ್ ಎಂಬ ಸಂತೋಷ್ ಪಾತ್ರ. ನಿರ್ದೇಶಕ ಚೇತನ್ ಕುಮಾರ್ ಅವರ ಕಥೆ ಹೇಳುವ ಶೈಲಿಯೇ ಚೆನ್ನಾಗಿದೆ. ಯಾವುದು ಎಷ್ಟಿರಬೇಕೋ, ಯಾವ ಪಾತ್ರಕ್ಕೆ ಎಷ್ಟು ಪ್ರಾಮುಖ್ಯತೆ ಕೊಡಬೇಕೋ ಅಷ್ಟನ್ನೂ ಈ ಚಿತ್ರದಲ್ಲಿ ಕೊಟ್ಟಿದ್ದಾರೆ. ಹಾಗಾಗಿ ಎಲ್ಲಿಯೂ ಬೋರ್ ಅನಿಸದೇ ತಾನಾಗಿಯೇ ಸಿನಿಮಾ ನೋಡಿಸಿಕೊಂಡು ಹೋಗುತ್ತದೆ. ಕಥೆ ಹೇಳುವ ರೀತಿ, ದೃಶ್ಯಗಳನ್ನು ಕಟ್ಟಿದ ರೀತಿ ಮತ್ತು ಹಾಡುಗಳನ್ನು ಜೋಡಿಸಿದ ಪರಿಯೇ ಸೊಗಸಾಗಿದೆ. ಸಿನಿಮಾದ ಮತ್ತೊಂದು ವಿಶೇಷ ಅಂದರೆ, ಗೆಳೆತನಕ್ಕೆ ಮತ್ತೊಂದು ವ್ಯಾಖ್ಯಾನ ಕೊಟ್ಟಿದೆ. ಈವರೆಗೂ ಪುನೀತ್ ರಾಜ್ ಕುಮಾರ್ ಅವರ ಚಿತ್ರಗಳಲ್ಲಿ ಭಾವನಾತ್ಮಕ ಸನ್ನಿವೇಶಗಳು ಬಂದಾಗ ಅಪ್ಪ, ಅಮ್ಮ, ತಂಗಿ ಈ ರೀತಿಯಲ್ಲಿ ದೃಶ್ಯಗಳಾಗಿವೆ. ಈ ಸಿನಿಮಾದಲ್ಲಿ ಗೆಳೆತನಕ್ಕೆ ಹೆಚ್ಚು ಪ್ರಾಮುಖ್ಯತೆ ನೀಡಿದ್ದಾರೆ ನಿರ್ದೇಶಕರು.

ಶಿವರಾಜ್ ಕುಮಾರ್ ಮತ್ತು ರಾಘವೇಂದ್ರ ರಾಜ್ ಕುಮಾರ್ ಜತೆ ಚೈಲ್ಡ್ ವುಡ್ ಎಪಿಸೋಡ್ ಬರುತ್ತದೆ. ಅದನ್ನು ಮನಮುಟ್ಟುವಂತೆ ಚಿತ್ರಿಸಲಾಗಿದೆ. ಈ ಮೂವರು ಸಹೋದರರು ಒಂದೇ ಸಿನಿಮಾದಲ್ಲಿ ತೋರಿಸಿದ ಹೆಗ್ಗಳಿಕೆ ಕೂಡ ಈ ಚಿತ್ರಕ್ಕೆ ಸಲ್ಲಬೇಕು. ಸಿನಿಮಾಟೋಗ್ರಫಿ, ಸಾಹಸ ಸನ್ನಿವೇಶಗಳು ಈ ಸಿನಿಮಾದ ಅಂದವನ್ನು ಮತ್ತಷ್ಟು ಹೆಚ್ಚಿಸಿವೆ. ಪಾತ್ರಗಳು ಮತ್ತು ಪಾತ್ರಗಳಿಗೆ ಹಾಕುವ ಕಾಸ್ಟ್ಯೂಮ್ ಕೂಡ ಅಷ್ಟೇ ಒಪ್ಪಿದೆ. ಹರಿಕೃಷ್ಣ ಅವರ ಹಿನ್ನೆಲೆ ಸಂಗೀತ ಮತ್ತು ಚರಣ್ ರಾಜ್ ಅವರ ಸಂಗೀತ ಸಂಯೋಜನೆ ಸೂಪರ್ಬ್. 

ಸಿನಿಮಾದ ಬಗ್ಗೆ ಹೇಳಲೇಬೇಕಾದ ಮತ್ತೊಂದು ಅಂಶವೆಂದರೆ, ಕ್ಲೈಮ್ಯಾಕ್ಸ್ ಪಾರ್ಟ್. ಕ್ಲೈಮ್ಯಾಕ್ಸ್ ನೋಡುತ್ತಿದ್ದಂತೆಯೇ ಎಮೋಷನಲ್ ಆಗಿಸುತ್ತದೆ. ಅಪ್ಪು ಸರ್ ಸಾಧನೆಯ ಬಗ್ಗೆ ಕ್ಲೈಮಾಕ್ಸ್ ನಲ್ಲಿ ಅಚ್ಚುಕಟ್ಟಾಗಿ ತೋರಿಸಲಾಗಿದೆ. ‘ಅಪ್ಪ ಅಜರಾಮರ, ಅಪ್ಪುಗೆ ಸಾವಿಲ್ಲ’ ಎಂದು ತೆರೆಯ ಮೇಲೆ ಬಂದಾಗ ಕಣ್ಣೀರು ತಡೆದುಕೊಳ್ಳಲು ಆಗುವುದೇ ಇಲ್ಲ. ಈ ಅಕ್ಷರಗಳು ಬರುತ್ತಿದ್ದಂತೆಯೇ ಇಡೀ ಥಿಯೇಟರ್ ನಲ್ಲಿದ್ದ ಪ್ರೇಕ್ಷಕರು ಎದ್ದು ನಿಂತು ಚೆಪ್ಪಾಳೆ ತಟ್ಟಿ ಗೌರವ ಸೂಚಿಸಿದ್ದು ಇದಕ್ಕೆ ಸಾಕ್ಷಿ.

Comments

Popular posts from this blog

ಆಸ್ತಿ ವಿಚಾರಕ್ಕೆ ತಂದೆಯ ಕತ್ತು ಹಿಸುಕಿ ಕೊಂದು ಬೆಂಕಿ ಹಚ್ಚಿದ ಪಾಪಿ ಮಗ