ಅಣ್ಣಾವ್ರ ಸಿನಿಮಾ ಪರಂಪರೆಗೆ ಅಪ್ಪು ಸಲ್ಲಿಸಿದ ಕೊನೆಯ ಶುಭವಿದಾಯ: ಜೇಮ್ಸ್ ಚಿತ್ರವಿಮರ್ಶೆ

 ಅಣ್ಣಾವ್ರ ಸಿನಿಮಾ ಎಂದರೆ ಸದಭಿರುಚಿಯ ಸಿನಿಮಾ, ಸಮಾಜಕ್ಕೆ ಸಂದೇಶ ಸಾರುವ ಸಿನಿಮಾ. ಎಲ್ಲಾ ವಯೋಮಾನದವರೂ, ಸಕುಟುಂಬಪರಿವಾರ ಸಮೇತರಾಗಿ ನೋಡಬಹುದಾದ ಸಿನಿಮಾ. 'ಜೇಮ್ಸ್' ಈ ಸಾಲಿಗೆ ಸೇರುವ ಸಿನಿಮಾ.



ಭಾರತದ ಮೊದಲ ಸೂಪರ್ ಸ್ಟಾರ್ ಎಂದು ಖ್ಯಾತಿ ಪಡೆದ ಬಾಲಿವುಡ್ ನಟ ರಾಜೇಶ್ ಖನ್ನಾ ಕಾರ್ಯಕ್ರಮವೊಂದರ ಜಗಮಗಿಸುವ ವೇದಿಕೆ ಮೇಲೆ, ಅಮಿತಾಭ್ ಉಪಸ್ಥಿತಿಯಲ್ಲಿ ಒಂದು ಮಾತು ಹೇಳಿದ್ದರು. ಆ ವೇಳೆಗೆ ಖನ್ನಾ ತೆರೆಮರೆಗೆ ಸರಿದು ಅಮಿತಾಭ್ ಸೂಪರ್ ಸ್ಟಾರ್ ಆಗಿ, ಬಿಗ್ ಬಿ ಎಂದು ಖ್ಯಾತಿ ಗಳಿಸಿದ್ದ ಸಮಯ. 'ಇವತ್ತು ನಾನಿರೋ ಜಾಗದಲ್ಲಿ ನೆನ್ನೆ ಬೇರೆ ಯಾರೋ ಇದ್ದರು, ನಾಳೆ ಇನ್ಯಾರೋ!'. ಯಾರ ಸ್ಥಾನವೂ ಯಾವ ದೊಣ್ಣೆನಾಯಕನದೂ ಅಲ್ಲ ಎನ್ನುವುದು ಖನ್ನಾ ಅವರ ಮಾತಿನ ತಾತ್ಪರ್ಯವಾಗಿತ್ತು. ಕನ್ನಡಿಗರ ಪಾಲಿಗೆ ಈ ಮಾತನ್ನು ಸುಳ್ಳಾಗಿಸಿದ್ದು ಪುನೀತ್ ರಾಜ್ ಕುಮಾರ್.

ಆ ಸೀಟು ಮತ್ತು ಸೀಟಿ ರಿಸರ್ವ್ಡ್

ಅಪ್ಪು ಆಸೀನರಾಗಿದ್ದ ಕನ್ನಡಿಗರ ಹೃದಯ ಸಿಂಹಾಸನಗಳು ಯಾವ ಕಾಲಕ್ಕೂ ಆಚಂದ್ರಾರ್ಕ ಅವರಿಗಾಗಿ ರಿಸರ್ವ್ಡ್ ಆಗಿಯೇ ಉಳಿದಿರುತ್ತವೆ. ಅದು ಯಾವತ್ತಿಗೂ ಖಾಲಿಯೇ. ಖಾಲಿತನ ಎಂದರೆ ಏನೆಂಬುದನ್ನು ಕನ್ನಡ ನಾಡಿಗೇ ಏಕಕಾಲಕ್ಕೆ ಕಲಿಸಿಕೊಟ್ಟಿದ್ದನ್ನು ನೆನೆದು ಹನಿಗಣ್ಣಾವುದಷ್ಟೇ ನಮ್ಮ ಪಾಲಿಗೆ ಉಳಿದದ್ದು. ಅಪ್ಪುವನ್ನು ಕೊನೆಯ ಬಾರಿ ಹಿರಿತೆರೆಯ ಮೇಲೆ ನೋಡಿ ಕಣ್ತುಂಬಿಕೊಳ್ಳಲು, ಹನಿಗಣ್ಣಾಗಲು ಸಾಧ್ಯವಾಗಿಸಿದ್ದು ಚೇತನ್ ಕುಮಾರ್ ನಿರ್ದೇಶನದ, ಕಿಶೋರ್ ಪತ್ತಿಕೊಂಡ ನಿರ್ಮಾಣದ 'ಜೇಮ್ಸ್' ಸಿನಿಮಾ.

ಪುನೀತ್ ರಾಜ್ ಕುಮಾರ್ ನಾಯಕನಾಗಿ ನಟಿಸಿದ ಕೊನೆಯ ಚಿತ್ರ 'ಜೇಮ್ಸ್' ಅಭಿಮಾನಿಗಳ ಪಾಲಿಗೆ ಹಬ್ಬವಾಗುವುದರಲ್ಲಿ ಎರಡು ಮಾತಿಲ್ಲ. ಹಲವು ಕಾರಣಗಳಿಗೆ ಜೇಮ್ಸ್ ಸಿನಿಮಾ ಕನ್ನಡ ಸಿನಿಮಾ ಇತಿಹಾಸದಲ್ಲಿ ಸ್ಥಾನ ಪಡೆದುಕೊಳ್ಳುತ್ತದೆ. ಅಣ್ಣಾವ್ರ ಸಿನಿಮಾ ಎಂದರೆ ಸದಭಿರುಚಿಯ ಸಿನಿಮಾ, ಸಮಾಜಕ್ಕೆ ಸಂದೇಶ ಸಾರುವ ಸಿನಿಮಾ. ಎಲ್ಲಾ ವಯೋಮಾನದವರೂ, ಸಕುಟುಂಬ ಪರಿವಾರ ಸಮೇತರಾಗಿ ನೋಡಬಹುದಾದ ಸಿನಿಮಾಗಳು. ಅ ಸಿನಿಮಾಗಳಲ್ಲಿ ಮೌಲ್ಯಗಳು, ಪಾಸಿಟಿವಿಟಿ ತುಂಬಿರುತ್ತಿದ್ದವು. ಅಣ್ಣಾವ್ರ ಸಿನಿಮಾ ಪರಂಪರೆಯನ್ನು ಯಶಸ್ವಿಯಾಗಿ ಮುಂದುವರಿಸಿದ್ದು ಅಪ್ಪು. 'ಜೇಮ್ಸ್' ಈ ಸಾಲಿಗೆ ಸೇರುವ ಸಿನಿಮಾ.  

ಜೇಮ್ಸ್ ಹೆಸರಿನ ರಹಸ್ಯ

ಸಿನಿಮಾದಲ್ಲಿ ಪುನೀತ್ ಹೆಸರು ಸಂತೋಷ್ ಜೇಮ್ಸ್ ಕುಮಾರ್. ಜೇಮ್ಸ್ ಹೆಸರು ಹೇಗೆ ಬಂತು ಅನ್ನೋದನ್ನು ಸಿನಿಮಾ ನೋಡಿ ತಿಳಿದರೇನೇ ಚಂದ. ಸೈನಿಕನಾಗಿ ದೇಶದ್ರೋಹಿಗಳನ್ನು ಬಗ್ಗುಬಡಿಯುವುದರಲ್ಲಿ ಆತ ನಿಸ್ಸೀಮ. ಆದರೆ ದೇಶದ್ರೋಹಿಗಳೆಂದರೆ ಶತ್ರುದೇಶಕ್ಕೆ ಸೇರಿದವರು ಮಾತ್ರವಲ್ಲವಲ್ಲ. ದೇಶದೊಳಗೆ ಮಾದಕವಸ್ತು ಸಾಗಣೆಯಂಥ ಇಲ್ಲೀಗಲ್ ಚಟುವಟಿಕೆಗಳಲ್ಲಿ ತೊಡಗಿದವರ ವಿರುದ್ಧ ಪುನೀತ್ ಸಮರ ಸಾರುತ್ತಾರೆ. ಗ್ಯಾಂಗ್ ಸ್ಟರ್ ಗಳನ್ನು ವಿಜೃಂಭಿಸಿ, ಸೆಲಬ್ರೇಟ್ ಮಾಡುವ ಸಿನಿಮಾಗಳ ನಡುವೆ ಪುನೀತ್, ಗ್ಯಾಂಗ್ ಸ್ಟರ್ ಗಳು ಕೂಡಾ ದೇಶದ್ರೋಹಿಗಳು ಎನ್ನುವ ಸಂದೇಶವನ್ನು ಜೇಮ್ಸ್ ಮೂಲಕ ಸಾರಿದ್ದಾರೆ. ಪುನೀತ್ ಅದಕ್ಕೇ ನಮಗೆ ಇಷ್ಟವಾಗೋದು.

ಒಮ್ಮೆ ಮಹಾರಾಜನೊಬ್ಬ ನಿಧನ ಹೊಂದುತ್ತಾನೆ. ರಾಜನ ಆಪ್ತರೇ ಆಸ್ತಿ ಹೊಡೆಯಲು ಸಂಚು ಮಾಡುತ್ತಾರೆ. ರಾಜನ ಪರಿವಾರದ ಮೇಲೆ ದಾಳಿ ಮಾಡುತ್ತಾರೆ. ಅವರ ರಕ್ಷಣೆಗೆ ಪುನೀತ್ ನಿಲ್ಲುತ್ತಾರೆ. ಈ ಪ್ರಕ್ರಿಯೆಯಲ್ಲಿ ರಾಜನ ಕುಟುಂಬಕ್ಕೆ ಸೇರಿದ ನಾಯಕಿ ನಿಶಾಳ ಮೇಲೆ ಪ್ರೀತಿ ಹುಟ್ಟುತ್ತದೆ. ಪ್ರಿಯಾ ಆನಂದ್ ನಾಯಕಿಯಾಗಿ ನಟಿಸಿದ್ದಾರೆ. ಅವರಿಗಾಗಿ ಪುನೀತ್ ಗ್ಯಾಂಗ್ ಸ್ಟರ್ ಗಳನ್ನು ಎದುರುಹಾಕಿಕೊಳ್ಳುತ್ತಾರೆ. ಅವರ ಸದ್ದಡಗಿಸಿದ ಮೇಲೆ ಸಿನಿಮಾದ ಮೊದಲ ಟ್ವಿಸ್ಟ್ ಬರುತ್ತದೆ. ಪುನೀತ್ ನಾಯಕಿಯ ಕುಟುಂಬದವರ ರಕ್ಷಣೆಗೆ ಇಳಿದಿದ್ದೇಕೆ? ನಾಯಕನ ದ್ವೇಷಕ್ಕೆ ಕಾರಣವನ್ನು ಫ್ಲ್ಯಾಷ್ ಬ್ಯಾಕ್ ಮೂಲಕ ತೋರಿಸಲಾಗುತ್ತದೆ. 

ಪಂಚಿಂಗ್ ಆಕ್ಷನ್ ಮತ್ತು ಡಯಲಾಗು

ಸಿನಿಮಾದ ಕೆಲ ದೃಶ್ಯಗಳು ಕೆಜಿಎಫ್ ಮತ್ತು ತೆಲುಗಿನ ಸಾಹೋ ಸಿನಿಮಾಗಳನ್ನು ನೆನಪಿಗೆ ತರುತ್ತದೆ. ಸಿನಿಮಾದ ಆಕ್ಷನ್ ಸೀನುಗಳು ತುಂಬಾ ಚೆನ್ನಾಗಿ ಮೂಡಿ ಬಂದಿದ್ದು ಅದರ ಕ್ರೆಡಿಟ್ಟು ಅಪ್ಪುಗೆ ಸಲ್ಲುತ್ತದೆ. ಪುನೀತ್ ಆಪ್ತ ಸ್ನೇಹಿತರಾಗಿ ತಿಲಕ್, ಶೈನ್ ಶೆಟ್ಟಿ, ಚಿಕ್ಕಣ್ಣ, ಹರ್ಷ ಮನೋಜ್ಞವಾಗಿ ನಟಿಸಿದ್ದಾರೆ. ಶರತ್ ಕುಮಾರ್, ಅನು ಪ್ರಭಾಕರ್, ಆದಿತ್ಯ ಮೆನನ್, ಶ್ರೀಕಾಂತ್, ರಂಗಾಯಣ ರಘು, ಸಾಧು ಕೋಕಿಲ ಗಮನಾರ್ಹ ಅಭಿನಯ ನೀಡಿದ್ದಾರೆ. ಇಫ್ ಯೂ ಆರ್ ಗ್ಯಾಂಗ್ ಸ್ಟರ್ ಐಯಾಮ್ ಸೋಲ್ಜರ್, ನಮ್ಮ ರೇಂಜನ್ನು ರೇಂಜ್ ರೋವರ್ ಕಾರ್ ನೋಡಿ ಅಳೆಯಬಾರದು ಎಂಬಿತ್ಯಾದಿ ಪಂಚಿಂಗ್ ಸಂಭಾಷಣೆಗಳು ಸಿನಿಮಾದಲ್ಲಿದೆ.  

ಪುನೀತ್ ಅವರಿಗೆ ದನಿ ನೀಡಿರುವ ಶಿವರಾಜ್ ಕುಮಾರ್ ಸಿನಿಮಾದಲ್ಲಿ ನಟನೆಯನ್ನೂ ಮಾಡಿದ್ದಾರೆ. ಅವರೊಂದಿಗೆ ರಾಘಣ್ಣ ಕೂಡಾ ಕೆಲ ದೃಶ್ಯಗಳಲ್ಲಿ ಕಾಣಿಸಿಕೊಳ್ಳುತ್ತಾರೆ. ಮೂರೂ ಮಂದಿ ನಟಿಸಿರುವುದು ಜೇಮ್ಸ್ ಸಿನಿಮಾದ ಮತ್ತೊಂದು ಸ್ಪೆಷಾಲಿಟಿ. ಸಿನಿಮಾ ಮುಗಿದ ನಂತರ ಪರದೆ ಮೇಲೆ ಮೂಡುವ ಕ್ರೆಡಿಟ್ ರೋಲ್ ಪ್ರೇಕ್ಷಕರನ್ನು ಅಳಿಸುತ್ತದೆ. ಈ ಕಡೆಯ ಸಿನಿಮಾವನ್ನು ಚಿತ್ರಮಂದಿರಗಳಲ್ಲಿ ನೋಡುವುದೇ, ಆ ಭಾವಪೂರ್ಣ ಕಲಾವಿದನಿಗೆ ನಾವು ಸಲ್ಲಿಸಬಹುದಾದ ಅರ್ಥಪೂರ್ಣ ಶುಭವಿದಾಯ.

Comments

Popular posts from this blog

ಆಸ್ತಿ ವಿಚಾರಕ್ಕೆ ತಂದೆಯ ಕತ್ತು ಹಿಸುಕಿ ಕೊಂದು ಬೆಂಕಿ ಹಚ್ಚಿದ ಪಾಪಿ ಮಗ