ಗೋಮಾಂಸ ಸಾಗಿಸುತ್ತಿದ್ದಾನೆಂದು ಶಂಕಿಸಿ ಹಿಗ್ಗಾಮುಗ್ಗಾ ಥಳಿಸಿದ್ರು
ಗೋಮಾಂಸ ಸಾಗಿಸುತ್ತಿದ್ದಾನೆಂದು ಶಂಕಿಸಿ ಹಿಗ್ಗಾಮುಗ್ಗಾ ಥಳಿಸಿದ್ರು

ಲಕ್ನೋ: ದನದ ಮಾಂಸ ಸಾಗಿಸುತ್ತಿದ್ದಾನೆ ಎನ್ನುವ ಶಂಕೆಯಿಂದ ವಾಹನ ಚಾಲಕನಿಗೆ ಉತ್ತರ ಪ್ರದೇಶದ ಮಥುರಾ ಗ್ರಾಮಸ್ಥರು ಹಿಗ್ಗಾಮುಗ್ಗಾ ಥಳಿಸಿದ್ದಾರೆ.
ಮೊಹಮ್ಮದ್ ಅಮೀರ್ (35) ಥಳಿತಕ್ಕೊಳಗಾದವರಾಗಿದ್ದಾರೆ. ಈ ಘಟನೆ ಉತ್ತರ ಪ್ರದೇಶದ ಮಥುರಾದ ರಾಲ್ ಗ್ರಾಮದಲ್ಲಿ ನಡೆದಿದೆ. ಪಿಕ್-ಅಪ್ ವ್ಯಾನ್‌ನಲ್ಲಿ ಗೋಮಾಂಸ ಮತ್ತು ದನಗಳನ್ನು ಕಳ್ಳಸಾಗಣೆ ಮಾಡುತ್ತಿದ್ದಾನೆ ಎಂದು ಶಂಕಿಸಿ ಥಳಿಸಿದ್ದಾರೆ.
ಮೊಹಮ್ಮದ್ ಅಮೀರ್ ವಾಹನ ಚಲಾಯಿಸಿಕೊಂಡು ಮಥುರಾದ ಗೋವರ್ಧನದಿಂದ ಹತ್ರಾಸ್‍ನಲ್ಲಿರುವ ಸಿಕಂದರಾವ್ ಕಡೆಗೆ ಹೋಗುತ್ತಿದ್ದನು. ಕೆಲವು ಸ್ಥಳೀಯರು ಗುಂಪು ವ್ಯಾನ್‍ನನ್ನು ತಡೆದರು. ಗೋ ಮಾಂಸ ಸಾಗಾಟ ಮಾಡುತ್ತಾನೆ ಎಂದು ಅನುಮಾನಿಸಿ ಚಾಲಕನಿಗೆ ಮನಬಂದಂತೆ ಥಳಿಸಿದ್ದಾರೆ.
ಪರವಾನಗಿ ಹೊಂದಿದ್ದ ಕೆಲವು ಪ್ರಾಣಿಗಳ ಶವಗಳನ್ನು ಹೊರತುಪಡಿಸಿ ಯಾವುದೂ ವ್ಯಾನ್‍ನಲ್ಲಿ ಕಂಡುಬಂದಿಲ್ಲ. ವ್ಯಾನ್ ಚಾಲಕನೊಂದಿಗೆ ಸಂಪರ್ಕವಿದೆ ಎಂದು ಶಂಕಿಸಿ ಇತರ ಇಬ್ಬರು ವ್ಯಕ್ತಿಗಳನ್ನು ಸಾರ್ವಜನಿಕರು ಥಳಿಸಿದ್ದಾರೆ. ಆ ಮೂವರನ್ನು ರಕ್ಷಿಸಿ ವೈದ್ಯಕೀಯ ಚಿಕಿತ್ಸೆಗೆ ಕಳುಹಿಸಲಾಗಿದೆ. ಜೈತ್ ಪೊಲೀಸ್ ಠಾಣೆಯಲ್ಲಿ ಎರಡು ಎಫ್‍ಐಆರ್‌ಗಳನ್ನು ದಾಖಲಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ವಿಎಚ್‍ಪಿಯ ವಿಕಾಶ್ ಶರ್ಮಾ ಮತ್ತು ಬಲರಾಮ್ ಠಾಕೂರ್ ಸೇರಿದಂತೆ 16 ಜನರು ಮತ್ತು ಕೆಲವು ಅಪರಿಚಿತ ವ್ಯಕ್ತಿಗಳ ವಿರುದ್ಧ, ಅಮೀರ್ ನೀಡಿದ ದೂರಿನ ಮೇರೆಗೆ 307 (ಕೊಲೆ ಯತ್ನ) ಸೇರಿದಂತೆ ಸಂಬಂಧಿತ ಐಪಿಸಿ ಸೆಕ್ಷನ್‍ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಶರ್ಮಾ ಮತ್ತು ಠಾಕೂರ್ ರಾಲ್ ಗ್ರಾಮದಲ್ಲಿ ತನ್ನ ವಾಹನವನ್ನು ಅಡ್ಡಗಟ್ಟಿದರು. ಪ್ರಾಣಿಗಳ ಶವಗಳನ್ನು ಹತ್ರಾಸ್‍ಗೆ ಕೊಂಡೊಯ್ಯಲಾಗುತ್ತಿದೆ ಎಂದು ತಿಳಿದ ನಂತರ ಥಳಿಸಲು ಪ್ರಾರಂಭಿಸಿದರು ಎಂದು ಅಮೀರ್ ಹೇಳಿದ್ದಾರೆ.
ಅಮೀರ್‌ಗೆ ಹೆಚ್ಚಿನ ಗಾಯಗಳಾಗಿಲ್ಲ, ಅವರ ಮುಖ ಮತ್ತು ಭುಜದ ಮೇಲೆ ಗಾಯಗಳಾಗಿವೆ ಅವರಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರು ತಿಳಿಸಿದ್ದಾರೆ.
Comments
Post a Comment