RRR- ಸ್ಟಾರ್ ವಾರ್ ಬೆಂಕಿಗೆ ತಣ್ಣನೆಯ ನೀರು ಸುರಿದ ನಿರ್ದೇಶಕ ರಾಜಮೌಳಿ


RRR- ಸ್ಟಾರ್ ವಾರ್ ಬೆಂಕಿಗೆ ತಣ್ಣನೆಯ ನೀರು ಸುರಿದ ನಿರ್ದೇಶಕ ರಾಜಮೌಳಿ

ಭಾರತೀಯ ಸಿನಿಮಾ ರಂಗದಲ್ಲೇ ಸ್ಟಾರ್ ವಾರ್ ಗೆ ತೆಲುಗು ಸಿನಿಮಾ ರಂಗ ಫೇಮಸ್. ಸಮಯ ಸಿಕ್ಕಾಗೆಲ್ಲ ಒಬ್ಬ ಕಲಾವಿದ ಮತ್ತೊಬ್ಬ ಕಲಾವಿದನಿಗೆ ಕಾಲೆಳೆಯುತ್ತಲೇ ಇರುತ್ತಾರೆ. ಸಿನಿಮಾಗಳಲ್ಲಿ ಡೈಲಾಗ್ ಮೂಲಕ ಟಾಂಗ್ ಕೊಡುವ ಸಂಪ್ರದಾಯ ಮೊದಲಿನಿಂದಲೂ ತೆಲುಗು ಚಿತ್ರೋದ್ಯಮದಲ್ಲಿದೆ. ಕೇವಲ ಕಲಾವಿದರು ಮಾತ್ರವಲ್ಲ ಅಭಿಮಾನಿಗಳು ಕೂಡ ಅದೇ ಸಂಪ್ರದಾಯವನ್ನೇ ಮುಂದುವರೆಸಿಕೊಂಡು ಬಂದಿದ್ದಾರೆ. ಇದನ್ನು ಸೂಕ್ಷ್ಮವಾಗಿ ಗಮನಿಸಿದ್ದ ನಿರ್ದೇಶಕ ರಾಜಮೌಳಿ, ಆ ಜೇನುಗೂಡಿಗೆ ಕೈ ಹಾಕಿ ಕಚ್ಚಿಸಿಕೊಳ್ಳದೇ ಭರಪೂರ್ ತುಪ್ಪವನ್ನೇ ಪಡೆದುಕೊಂಡಿದ್ದಾರೆ.

ಜೂನಿಯರ್ ಎನ್.ಟಿ.ಆರ್ ಮತ್ತು ರಾಮಚರಣ್ ತೇಜ ಸಿನಿಮಾಗಳು ಯಾವತ್ತಿಗೂ ಪೈಪೋಟಿ ಮಾಡುತ್ತಿವೆ. ಇಬ್ಬರೂ ಅಸಂಖ್ಯಾತ ಅಭಿಮಾನಿಗಳನ್ನು ಹೊಂದಿರುವ ನಟರು. ಈ ಹಿಂದಿನ ಸಿನಿಮಾಗಳಲ್ಲಿ ಪಂಚಿಂಗ್ ಡೈಲಾಗ್ ಮೂಲಕ ಒಬ್ಬರನ್ನೊಬ್ಬರು ಟೀಕಿಸಿಕೊಂಡಿದ್ದಾರೆ. ಕಾಲೆಳೆದಿದ್ದಾರೆ. ಟಾಂಗ್ ಕೊಡುವಂತಹ ಡೈಲಾಗ್ ಹೊಡೆದಿದ್ದಾರೆ. ಇಂತಹ ಇಬ್ಬರು ಸ್ಟಾರ್ ನಟರನ್ನು ಒಟ್ಟಾಗಿಸಿ, ಸಂಭಾಳಿಸಿ ‘ಆರ್.ಆರ್.ಆರ್’ ಸಿನಿಮಾ ಮಾಡಿ ಗೆದ್ದಿದ್ದಾರೆ ರಾಜಮೌಳಿ. 

ಈ ಇಬ್ಬರೂ ಅಭಿಮಾನಿಗಳ ನಾಡಿಮಿಡಿತವನ್ನು ಸರಿಯಾಗಿ ಬಳಸಿಕೊಂಡು, ಹಾಗೆಯೇ ಸಿನಿಮಾದಲ್ಲೂ ದೃಶ್ಯಗಳನ್ನು ಹೆಣೆದಿದ್ದಾರೆ. ಆಯಾ ಪಾತ್ರಕ್ಕೆ ಏನೆಲ್ಲ ಬಿಲ್ಡ್ ಅಪ್ ಬೇಕಿತ್ತೋ ಅಷ್ಟನ್ನೂ ದಯಪಾಲಿಸಿದ್ದಾರೆ. ಯಾರ ಅಭಿಮಾನಿಗೂ ನೋವಾಗದಂತೆ ಚಿತ್ರಿಸಿದ್ದಾರೆ. ಹಾಗಾಗಿ ಇಬ್ಬರೂ ಕಲಾವಿದರ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ.

ಥಿಯೇಟರ್ ಒಳಗೆ ಹೀಗಿದ್ದರೆ ಚಿತ್ರಮಂದಿರದ ಹೊರಗೆ ಮತ್ತೊಂದು ರೀತಿಯ ವಾತಾವರಣ ಸೃಷ್ಟಿಯಾಗಿದೆ. ತಮ್ಮ ತಮ್ಮ ನೆಚ್ಚಿನ ನಟರ ಪೋಸ್ಟರ್ ಗೆ ಹಾಲು, ಹೂವು ಹಾಕುವುದು, ಪೂಜೆ ಸಲ್ಲಿಸುವುದು ಇದು ಇದ್ದೇ ಇದೆ. ಕೆಲವು ಕಡೆ ರಾಮ್ ಚರಣ್ ತೇಜ ಅವರ ಅಭಿಮಾನಿಗಳು ತಮ್ಮ ನೆಚ್ಚಿನ ನಟನಿಗೆ ಪ್ರಾಮುಖ್ಯತೆ ಕೊಟ್ಟರೆ, ಮತ್ತೊಂದು ಕಡೆ ಜೂನಿಯರ್ ಎನ್.ಟಿ.ಆರ್ ಗೆ ಮಹತ್ವ ನೀಡಿದ್ದಾರೆ. ಆದರೆ, ಹೆಚ್ಚಿನ ಸಂಖ್ಯೆಯಲ್ಲಿ ಅಭಿಮಾನಿಗಳು ಒಟ್ಟಾಗಿಯೇ ಸಿನಿಮಾ ನೋಡುತ್ತಿದ್ದಾರೆ. ಇಂಥದ್ದೊಂದು ಮಹತ್ವದ ಬದಲಾವಣೆಗೆ ‘ಆರ್.ಆರ್.ಆರ್’ ಕಾರಣವಾಗಿದ್ದಂತೂ ಸುಳ್ಳಲ್ಲ.

ಕೇವಲ ಸಿನಿಮಾ ಮಾಡಿ ಗೆಲ್ಲುವುದಲ್ಲ, ಸ್ಟಾರ್ ಗಳನ್ನು ನಿಭಾಯಿಸಿಕೊಂಡು ಅಭಿಮಾನಿಗಳನ್ನು ಸಮಾಧಾನಿಸುವುದು ಸಿನಿಮಾ ಗೆಲುವಿಗಿಂತ ದೊಡ್ಡದರು. ಅದರಲ್ಲಿ ರಾಜಮೌಳಿ ಭಾರೀ ಅಂತರದಿಂದ ಗೆದ್ದಿದ್ದಾರೆ.

Comments

Popular posts from this blog

ಸಾರ್ವಜನಿಕ ಶೌಚಾಲಯ ಕದ್ದು, 45 ಸಾವಿರ ರೂ.ಗೆ ಮಾರಿದ ಕಿರಾತಕ

60 ಅಡಿ ಬಾವಿ ತೋಡಿದ ಚಿಕ್ಕಮಗಳೂರಿನ ಭಗೀರಥ ದಂಪತಿ

ಬ್ರಾಂಡ್ ವ್ಯಾಲ್ಯೂ ಕಡಿಮೆಯಾದರೂ ಕೊಹ್ಲಿ ನಂ.1 – ಯಾರ ಮೌಲ್ಯ ಎಷ್ಟು